ಪದ ಎಂದರೆ - ಮೂಲರೂಪ ಪ್ರಕೃತಿಯೊಂದಕ್ಕೆ ಪ್ರತ್ಯಯ ಹತ್ತಿದ ರೂಪ.
ನಾಮಪ್ರಕೃತಿ ಎಂದರೆ - ನಾಮಪದದ ಮೂಲರೂಪವಾಗಿಯೂ, ಕ್ರಿಯೆಯ ಅರ್ಥವನ್ನು ಕೊಡದೆಯೂ ಇರುವ ಶಬ್ದ.
ನಾಮಪ್ರಕೃತಿಗಳಿಗೆ ಇರುವ ಮತ್ತೊಂದು ಹೆಸರು - ಪ್ರಾತಿಪದಿಕಗಳು.
ನಾಮಪ್ರಕೃತಿಗೆ ಕೆಲವು ಉದಾಹರಣೆಗಳು - ಮರ, ನೆಲ, ಹುಡುಗ, ಮಂಚ, ಕಟ್ಟಿಗೆ ಇತ್ಯಾದಿ.
ನಾಮಪ್ರಕೃತಿಗಳಿಗೆ ನಾಮವಿಭಕ್ತಿ ಪ್ರತ್ಯಯಗಳು ಸೇರಿದರೆ ಅದು - ನಾಮಪದ.
ವಿಭಕ್ತಿ ಪ್ರತ್ಯಯಗಳು ಎಂದರೆ - ಸ್ವತಂತ್ರವಾಗಿ ಅರ್ಥವಿಲ್ಲದೆ, ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆ ಬೇರೆ ಅರ್ಥವನ್ನು ಉಂಟುಮಾಡುವ ಉ, ಅನ್ನು, ಇಂದ, ಗೆ, ಅಲ್ಲಿ ಮುಂತಾದವುಗಳು.
'ಹುಡುಗನು' ಈ ನಾಮಪದದಲ್ಲಿರುವ ನಾಮಪ್ರಕೃತಿ - ಹುಡುಗ.
'ಹುಡುಗನು' ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ - ಉ.
'ತಂದೆಯೇ' ಈ ನಾಮಪದದಲ್ಲಿರುವ ನಾಮಪ್ರಕೃತಿ - ತಂದೆ.
'ತಂದೆಯೇ' ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ - ಏ.
'ರಾಮಾ' ಈ ನಾಮಪದದಲ್ಲಿರುವ ನಾಮಪ್ರಕೃತಿ - ರಾಮ.
'ರಾಮಾ' ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ - ಆ.
'ತಾಯಿಯಲ್ಲಿ' ಈ ನಾಮಪದದಲ್ಲಿರುವ ನಾಮಪ್ರಕೃತಿ - ತಾಯಿ.
'ತಾಯಿಯಲ್ಲಿ' ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ - ಅಲ್ಲಿ.
'ಬಟ್ಟೆಯಿಂದ' ಈ ನಾಮಪದದಲ್ಲಿರುವ ನಾಮಪ್ರಕೃತಿ - ಬಟ್ಟೆ.
'ಬಟ್ಟೆಯಿಂದ' ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ - ಇಂದ.
'ಅಕ್ಕನ' ಈ ನಾಮಪದದಲ್ಲಿರುವ ನಾಮಪ್ರಕೃತಿ - ಅಕ್ಕ.
'ಅಕ್ಕನ' ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ - ಅ.
'ಮಂಚವನ್ನು' ಈ ನಾಮಪದದಲ್ಲಿರುವ ನಾಮಪ್ರಕೃತಿ - ಮಂಚ.
'ಮಂಚವನ್ನು' ಈ ನಾಮಪದದಲ್ಲಿರುವ ನಾಮವಿಭಕ್ತಿಪ್ರತ್ಯಯ - ಅನ್ನು.
ನಾಮಪ್ರಕೃತಿಗಳಲ್ಲಿರುವ ಎರಡು ವಿಧಗಳು - ಸಹಜ ನಾಮಪ್ರಕೃತಿಗಳು ಮತ್ತು ಸಾಧಿತ (ನಿಷ್ಪನ್ನ) ನಾಮಪ್ರಕೃತಿಗಳು.
ಸಹಜ ನಾಮಪ್ರಕೃತಿಗಳಲ್ಲಿ ಕಂಡುಬರುವ ಪ್ರಮುಖ ಗುಂಪುಗಳು - ವಸ್ತುವಾಚಕಗಳು, ಗುಣವಾಚಕಗಳು, ಸಂಖ್ಯಾವಾಚಕಗಳು, ಸಂಖ್ಯೆಯವಾಚಕಗಳು, ಭಾವನಾಮಗಳು, ಪರಿಮಾಣವಾಚಕಗಳು, ಪ್ರಕಾರವಾಚಕಗಳು, ದಿಗ್ವಾಚಕಗಳು, ಸರ್ವನಾಮಗಳು ಮುಂತಾದವು.
ವಸ್ತುವಾಚಕ ಎಂದರೆ - ವಸ್ತುಗಳ ಹೆಸರನ್ನು ಹೇಳುವ ಶಬ್ದಗಳು.
ವಸ್ತುವಾಚಕಗಳಿಗೆ ಉದಾಹರಣೆಗಳೆಂದರೆ - ಮನುಷ್ಯ, ಕೃಷ್ಣ, ನಾಯಿ, ಕಲ್ಲು, ಮರ, ಹಣ್ಣು ಮುಂತಾದವು.
ವಸ್ತುವಾಚಕಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳು - ರೂಢನಾಮ, ಅಂಕಿತನಾಮ ಮತ್ತು ಅನ್ವರ್ಥನಾಮ.
ರೂಢನಾಮ ಎಂದರೆ - ರೂಢಿಯಿಂದ ಬಂದ ಸಾಮಾನ್ಯವಾಚಕಗಳು.
ರೂಢನಾಮಗಳಿಗೆ ಉದಾಹರಣೆಗಳು - ನದಿ, ಪರ್ವತ, ಪಟ್ಟಣ, ಮನುಷ್ಯ, ದೇಶ ಇತ್ಯಾದಿ.
ಅಂಕಿತನಾಮ ಎಂದರೆ - ವ್ಯವಹಾರದ ಉಪಯೋಗಕ್ಕೆ ಇಟ್ಟುಕೊಂಡ ಹೆಸರುಗಳು.
ಅಂಕಿತನಾಮಗಳಿಗೆ ಉದಾಹರಣೆಗಳು - ಗಂಗಾ, ಹಿಮಾಲಯ, ರಾಮ, ಭಾರತ, ಬೆಂಗಳೂರು ಇತ್ಯಾದಿ.
ಅನ್ವರ್ಥನಾಮ ಎಂದರೆ - ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳು.
ಅನ್ವರ್ಥನಾಮಗಳಿಗೆ ಉದಾಹರಣೆಗಳು - ಕುಂಟ, ಕುರುಡ, ವ್ಯಾಪಾರಿ, ವಿದ್ವಾಂಸ, ರೋಗಿ ಇತ್ಯಾದಿ.
ಗುಣವಾಚಕಗಳು ಎಂದರೆ - ವಸ್ತುಗಳ ಗುಣ, ರೀತಿ, ಸ್ವಭಾವಗಳನ್ನು ತಿಳಿಸುವ ವಿಶೇಷಣಗಳು.
ಗುಣವಾಚಕಗಳಿಗೆ ಉದಾಹರಣೆಗಳು - ದೊಡ್ಡ, ಒಳ್ಳೆಯ, ಕರಿಯ, ಹಳೆಯ, ಹೊಸದು ಇತ್ಯಾದಿ.
ಸಂಖ್ಯಾವಾಚಕಗಳು ಎಂದರೆ - ಸಂಖ್ಯೆಯನ್ನು ಹೇಳುವ ಶಬ್ದಗಳು.
ಸಂಖ್ಯಾವಾಚಕಗಳಿಗೆ ಉದಾಹರಣೆಗಳು - ಒಂದು, ಎರಡು, ಮೂರು, ಹತ್ತು, ಸಾವಿರ, ಲಕ್ಷ ಇತ್ಯಾದಿ.
ಸಂಖ್ಯೆಯವಾಚಕಗಳು ಎಂದರೆ - ಸಂಖ್ಯೆಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳು.
ಸಂಖ್ಯೆಯವಾಚಕಗಳಿಗೆ ಉದಾಹರಣೆಗಳು - ಮೂವರು, ನಾಲ್ವರು, ಐವರು, ಒಂದನೆಯ, ಎರಡನೆಯ, ಮೂರನೆಯ ಇತ್ಯಾದಿ.
ಭಾವನಾಮಗಳು ಎಂದರೆ - ವಸ್ತುಗಳ ಮತ್ತು ಕ್ರಿಯೆಯ ಭಾವವನ್ನು ತಿಳಿಸುವ ಶಬ್ದಗಳು.
ಭಾವನಾಮಗಳಿಗೆ ಉದಾಹರಣೆಗಳು - ಬಿಳುಪು, ಕಪ್ಪು, ಹಿರಿಮೆ, ನೋಟ, ಮಾಟ ಇತ್ಯಾದಿ.
ಪರಿಮಾಣವಾಚಕಗಳು ಎಂದರೆ - ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳು.
ಪರಿಮಾಣವಾಚಕಗಳಿಗೆ ಉದಾಹರಣೆಗಳು - ಅಷ್ಟು, ಇಷ್ಟು, ಹಲವು, ಕೆಲವು, ಇನಿತು ಇತ್ಯಾದಿ.
ಪ್ರಕಾರವಾಚಕಗಳು ಎಂದರೆ - ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳು.
ಪ್ರಕಾರವಾಚಕಗಳಿಗೆ ಉದಾಹರಣೆಗಳು - ಅಂತಹ, ಇಂತಹ, ಅಂತಹನು, ಎಂತಹ ಇತ್ಯಾದಿ.
ದಿಗ್ವಾಚಕಗಳು ಎಂದರೆ - ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳು.
ದಿಗ್ವಾಚಕಗಳಿಗೆ ಉದಾಹರಣೆಗಳು - ಉತ್ತರ, ದಕ್ಷಿಣ, ಅಚೆ, ಈಚೆ, ಮೂಡಲು, ಪಡುವಲು ಇತ್ಯಾದಿ.
ಸರ್ವನಾಮಗಳು ಎಂದರೆ - ವಸ್ತುವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅದನ್ನು ಸೂಚಿಸುವ ಶಬ್ದಗಳು.
ಸರ್ವನಾಮಗಳಿಗೆ ಉದಾಹರಣೆಗಳು - ಅದು, ಇದು, ತಾನು, ತಾವು, ನೀನು, ನೀವು, ಅವನು, ಯಾವನು, ಯಾವಳು ಇತ್ಯಾದಿ.
ಸರ್ವನಾಮಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದ್ದು ಅವುಗಳು - ಪುರುಷಾರ್ಥಕ ಸರ್ವನಾಮಗಳು, ಪ್ರಶ್ನಾರ್ಥಕ ಸರ್ವನಾಮಗಳು ಮತ್ತು ಆತ್ಮಾರ್ಥಕ ಸರ್ವನಾಮಗಳು.
ಪುರುಷಾರ್ಥಕ ಸರ್ವನಾಮಗಳಿಗೆ ಉದಾಹರಣೆಗಳು - ಉತ್ತಮ ಪುರುಷ ಸರ್ವನಾಮಗಳಾದ ನಾನು-ನಾವು, ಮಧ್ಯಮ ಪುರುಷ ಸರ್ವನಾಮಗಳಾದ ನೀನು-ನೀವು ಮತ್ತು ಪ್ರಥಮ ಪುರುಷ ಸರ್ವನಾಮಗಳಾದ ಅವನು-ಅವರು, ಅವಳು-ಅವರು, ಅದು-ಅವು.
ಪ್ರಶ್ನಾರ್ಥಕ ಸರ್ವನಾಮಗಳಿಗೆ ಉದಾಹರಣೆಗಳು - ಯಾವುದು, ಏನು, ಯಾವನು, ಯಾವಳು ಇತ್ಯಾದಿ.
ಆತ್ಮಾರ್ಥಕ ಸರ್ವನಾಮಗಳಿಗೆ ಉದಾಹರಣೆಗಳು - ತಾನು ಮತ್ತು ತಾವು.
ಲಿಂಗಗಳ ಮೂರು ಪ್ರಮುಖ ಪ್ರಕಾರಗಳು - ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ.
ಯಾವ ಶಬ್ದ ಪ್ರಯೋಗ ಮಾಡಿದಾಗ ಗಂಡಸು ಎಂಬ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು - ಪುಲ್ಲಿಂಗ.
ಯಾವ ಶಬ್ದ ಪ್ರಯೋಗ ಮಾಡಿದಾಗ ಹೆಂಗಸು ಎಂಬ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು - ಸ್ತ್ರೀಲಿಂಗ.
ಯಾವ ಶಬ್ದವನ್ನು ಪ್ರಯೋಗ ಮಾಡಿದಾಗ ಹೆಂಗಸು ಗಂಡಸು ಎರಡೂ ಅಲ್ಲದ ಅರ್ಥವು ಮನಸ್ಸಿಗೆ ಹೊಳೆಯುವುದೋ ಅದು - ನಪುಂಸಕಲಿಂಗ.
ಪುಲ್ಲಿಂಗದಂತೆಯೂ, ನಪುಂಸಕಲಿಂಗದಂತೆಯೂ, ಪ್ರಯೋಗಿಸಲಾಗುವ ಸೂರ್ಯ, ಚಂದ್ರ, ಶನಿ, ಮಂಗಳ ಮುಂತಾದ ಗ್ರಹವಾಚಕ ಶಬ್ದಗಳನ್ನು ಹೀಗೆಂದು ಕರೆಯುತ್ತೇವೆ - ಪುನ್ನಪುಂಸಕಲಿಂಗಗಳು.
ಸ್ತ್ರೀಲಿಂಗ, ನಪುಂಸಕಲಿಂಗಗಳೆರಡರಲ್ಲೂ ಪ್ರಯೋಗಿಸಲ್ಪಡುವ ಲಕ್ಷ್ಮಿ, ಸರಸ್ವತಿ, ಪಾರ್ವತಿ, ದೇವಿ, ಮುಂತಾದ ದೇವತಾವಾಚಕ ಶಬ್ದಗಳನ್ನು ಹೀಗೆಂದು ಕರೆಯುವರು - ಸ್ತ್ರೀನಪುಂಸಕಲಿಂಗಗಳು.
ಯಾವಾಗಲೂ ನಪುಂಸಕಲಿಂಗದಲ್ಲಿಯೇ ಪ್ರಯೋಗಿಸಲ್ಪಡುವ ಶಿಶು, ಜನ, ದಂಡು ಮುಂತಾದ ಶಬ್ದಗಳನ್ನು ಹೀಗೆಂದು ಕರೆಯುವರು - ನಿತ್ಯನಪುಂಸಕಲಿಂಗಗಳು.
ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಲಿಂಗ ಈ ಮೂರರಲ್ಲೂ ಒಂದೇ ರೀತಿ ಪ್ರಯೋಗಿಸಲ್ಪಡುವ ಶಬ್ದಗಳಿಗೆ ಹೀಗೆಂದು ಹೇಳುವರು - ವಾಚ್ಯಲಿಂಗಗಳು ಅಥವಾ ವಿಶೇಷ್ಯಾಧೀನಲಿಂಗಗಳು.
ವಾಚ್ಯಲಿಂಗಗಳಿಗೆ ಉದಾಹರಣೆಗಳು - ನಾನು, ನೀನು, ತಾನು, ಹಲವು, ಕೆಲವು, ಒಳ್ಳೆಯ, ಕೆಟ್ಟ, ಬಿಳಿಯ, ಕರಿಯ ಇತ್ಯಾದಿ.
ವಚನಗಳಲ್ಲಿನ ಎರಡು ವಿಧಗಳು - ಏಕವಚನ ಮತ್ತು ಬಹುವಚನ.
ಏಕವಚನ ಎಂದರೆ - ಒಂದು ವಸ್ತು ಎಂದು ಹೇಳುವ ಶಬ್ದಗಳು.
ಬಹುವಚನ ಎಂದರೆ - ಒಂದಕ್ಕಿಂತ ಹೆಚ್ಚು ಎಂದು ಹೇಳುವ ಶಬ್ದಗಳು.
0 Comments