ಜೇನು ಕೃಷಿ ಎಲ್ಲಾ ಪ್ರದೇಶಗಳ ರೈತರು ಉಪಕಸುಬಾಗಿ ಅಥವಾ ಮುಖ್ಯ ಕಸುಬಾಗಿ ಕಡಿಮೆ ಬಂಡವಾಳದಿಂದ ನಿರ್ವಹಿಸಬಹುದಾದ ಒಂದು ಲಾಭದಾಯಕ ಉದ್ದಿಮೆಯಾಗಿದೆ. ಜೇನು ಕೃಷಿಗೆಂದೇ ಪ್ರತ್ಯೇಕ ಜಮೀನು, ನೀರು, ವಿದ್ಯುಚ್ಛಕ್ತಿಯ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ಈ ಉದ್ದಿಮೆಯು ಕೃಷಿ/ತೋಟಗಾರಿಕೆ /ಕೃಷಿ ಅರಣ್ಯ. ಕೃಷಿ ಪಶುಪಾಲನೆ ಮುಂತಾದ ಯಾವುದೇ ಸಮ್ಮಿಶ್ರ ಕೃಷಿ ಪದ್ಧತಿಗಳ ಸಂಪನ್ಮೂಲಗಳಿಗೆ ಸ್ಪರ್ಧೆಯೊಡ್ಡದೇ, ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲಗಳಾದ ಪರಾಗ ಮತ್ತು ಮಕರಂದವನ್ನು ಬಳಸಿಕೊಂಡು ಕೃಷಿಕರಿಗೆ ಲಾಭವನ್ನು ತಂದುಕೊಡುತ್ತದೆ. ಸುಲಭ ತಾಂತ್ರಿಕತೆಯಿರುವ ಇದನ್ನು ಆಸಕ್ತಿ ಇರುವ ಯಾರು ಬೇಕಾದರೂ ಮಾಡಬಹುದು. ಜೇನು ಕುಟುಂಬದ ಮುಖ್ಯ ಉತ್ಪನ್ನವಾದ ಜೇನುತುಪ್ಪವು ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಇದರ ನಿಯಮಿತ ಸೇವನೆ ಆರೋಗ್ಯವನ್ನು ವರ್ಧಿಸುತ್ತದೆ. ಜೇನುಗೂಡಿನಿಂದ ದೊರೆಯಬಹುದಾದ ಇನ್ನಿತರ ಉತ್ಪನ್ನಗಳಾದ ಮೇಣ, ಜೇನು ಅಂಟು, ಜೇನು ವಿಷ, ಪರಾಗ, ರಾಜಶಾಹಿರಸ ಮುಂತಾದವುಗಳೂ ಕೂಡ ಕೃಷಿಕರ ಆದಾಯ ಹೆಚ್ಚಿಸುವಲ್ಲಿ ಸಹಕಾರಿಯಾಗಬಲ್ಲವು.
ಜೇನುಗೂಡಿನ ರಚನೆ :
ಜೇನುನೊಣಗಳು ಸಂಘ ಜೀವಿಗಳಾಗಿದ್ದು, ಜಾತಿ ಹಾಗೂ ವಯಸ್ಸಿಗನುಗುಣವಾಗಿ ಗೂಡಿನ ವಿವಿಧ ಚಟುವಟಿಕೆಗಳಲ್ಲಿ ನಿರತವಾಗಿರತ್ತವೆ. ಜೇನು ಕುಟುಂಬದಲ್ಲಿ ರಾಣಿ, ಕೆಲಸಗಾರ ಹಾಗೂ ಗಂಡುನೊಣಗಳೆಂಬ ಮೂರು ಜಾತಿಯ ನೊಣಗಳಿದ್ದು, ಒಂದು ಕುಟುಂಬದಲ್ಲಿ ಒಂದೇ ಒಂದು ರಾಣಿ, ಸಾವಿರಾರು ಕೆಲಸಗಾರ ನೊಣಗಳು ಹಾಗೂ ನೂರಾರು ಗಂಡುನೊಣಗಳು ಇರುತ್ತವೆ. ಪ್ರತಿನಿತ್ಯ ಮೊಟ್ಟೆಗಳನ್ನು ಇಡುತ್ತ ಗೂಡಿನಲ್ಲಿ ನೊಣಗಳ ಸಂಖ್ಯೆಯನ್ನು ಹೆಚ್ಚಿಸುವುದು. ಜೊತೆಗೆ, ತನ್ನ ದೇಹದ ಗ್ರಂಥಿಗಳಿಂದ ರಾಸಾಯನಿಕಗಳನ್ನು ಸ್ರವಿಸಿ ಆ ಮೂಲಕ ಗೂಡಿನ ಎಲ್ಲಾ ಕಾರ್ಯಗಳೂ ಕ್ರಮಬದ್ಧವಾಗಿ ನಡೆಯುವಂತೆ ಮಾಡುವುದೇ ರಾಣಿ ನೊಣದ ಮುಖ್ಯ ಕಾರ್ಯ. ಗಾತ್ರದಲ್ಲಿ ಇದು ಅತ್ಯಂತ ದೊಡ್ಡದು ಹಾಗೂ ಹೊಟ್ಟೆಯ ತುದಿ ಚೂಪಾಗಿದ್ದು, ರೆಕ್ಕೆಗಳು ಹೊಟ್ಟೆಯ ಅರ್ಧ ಭಾಗವನ್ನು ಮಾತ್ರ ಮುಚ್ಚಿರುತ್ತವೆ. ಇದರ ಜೀವಿತಾವಧಿ 2-3 ವರ್ಷಗಳು. ಗಂಡುನೊಣಗಳು, ಮಧ್ಯಮ ಗಾತ್ರದವುಗಳಾಗಿದ್ದು, ಹೊಟ್ಟೆಯ ತುದಿ ಮೊಂಡಾಗಿರುತ್ತದೆ. ಜೇನು ಕುಟಂಬಗಳು ವಿಭಜನೆ ಹೊಂದುವ ಸಂದರ್ಭದಲ್ಲಿ ಮಾತ್ರ ಇವುಗಳ ಉತ್ಪತ್ತಿ ಗೂಡಿನಲ್ಲಿ ಕಂಡುಬರುತ್ತದೆ. ಹೊಸ ರಾಣಿಯ ಗರ್ಭಧಾರಣೆ ಆದ ನಂತರ ಉಳಿಯುವ ಗಂಡುನೊಣಗಳನ್ನು ಕೆಲಸಗಾರ ನೊಣಗಳು ಕ್ರಮೇಣ ಕೊಂದು ಹೊರಹಾಕುತ್ತವೆ ಅಥವಾ ಆ ಗಂಡುನೊಣಗಳು ಸ್ವಾಭಾವಿಕ ಸಾವನ್ನೇ ಹೊಂದಬಹುದು. ಕೆಲಸಗಾರ ನೊಣಗಳು ಗಾತ್ರದಲ್ಲಿ ಚಿಕ್ಕದಾಗಿದ್ದು, ಅವುಗಳ ಹೊಟ್ಟೆಯ ತುದಿ ಚೂಪಾಗಿರುತ್ತದೆ.
ಹೊಟ್ಟೆಯ ತುದಿಯಲ್ಲಿ ಚುಚ್ಚುವ ಮುಳ್ಳು ಇರುತ್ತದೆ. ರೆಕ್ಕೆಗಳು ಹೊಟ್ಟೆಯನ್ನು ಪೂರ್ಣವಾಗಿ ಮುಚ್ಚಿರುತ್ತವೆ. ಕೆಲಸಗಾರ ನೊಣಗಳ ಬಾಯಿ ಹಾಗೂ ಕಾಲುಗಳು ಸೂಕ್ತ ಮಾರ್ಪಾಡುಗಳನ್ನು ಹೊಂದಿದ್ದು, ಮಕರಂದ ಹಾಗೂ ಪರವಾಗಿ ಸಂಗ್ರಹಣೆಗೆ ಸಹಾಯಕವಾಗಿರುತ್ತವೆ. ವಯಸ್ಸಿಗನುಗುಣವಾಗಿ ಕೆಲಸಗಾರ ನೊಣಗಳು ಗೂಡಿನಲ್ಲಿ ಎರಿಯನ್ನು ಕಟ್ಟುವುದು, ಗೂಡು ಕಣಗಳ ಸ್ವಚ್ಛತೆ, ಆಹಾರ ಉಣಿಸುವುದು, ನೀರು, ಪರಾಗ, ಮಕರಂದದ ಸಂಗ್ರಹಣೆ, ಗೂಡಿನ ರಕ್ಷಣೆ, ಹೊಸ ಜಾಗ ಹಾಗೂ ಆಹಾರದ ಹುಡುಕುವುದು ಇತ್ಯಾದಿ ಎಲ್ಲಾ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತವೆ. ಆಹಾರ ಸಂಗ್ರಹಣೆಗೆ ತಮ್ಮ ಗೂಡಿನಿಂದ ಸುಮಾರು 1 ರಿಂದ ಒಂದೂವರೆ ಕಿ,ಮೀ ಸುತ್ತಳತೆಯ ಪ್ರದೇಶದಲ್ಲಿ ಕೆಲಸ ಮಾಡುವ ಇವು ಸುಮಾರು 45 ರಿಂದ 85 ದಿನಗಳವರೆಗೆ ಬದುಕಿರುತ್ತವೆ.
ಜೇನುಕುಟುಂಬದಲ್ಲಿ ಎರಿಗಳ ರಚನೆ ಮೇಣದಿಂದ ಆಗಿದ್ದು, ಒಂದು ಎರಿಯ ಎರಡೂ ಬದಿಯಲ್ಲಿ ಸಾವಿರಾರು ಷಡ್ಡುಜಾಕೃತಿಯ ಕಣಗಳಿರುತ್ತವೆ. ಸಾಮಾನ್ಯವಾಗಿ ಎರಿಯ ಮೇಲ್ಬಾಗದಲ್ಲಿ ಜೇನಿನ ಸಂಗ್ರಹಣೆ, ನಂತರದಲ್ಲಿ ಪರಾಗದ ಸಂಗ್ರಹಣೆ ಇದ್ದು, ಇನ್ನುಳಿದ ಹೆಚ್ಚು ಭಾಗದಲ್ಲಿ ಮೊಟ್ಟೆ, ಮರಿ ಹಾಗೂ ಕೋಶಾವಸ್ಥೆಯ ಹುಳುಗಳು ಕಂಡುಬರುತ್ತವೆ. ಹೊಸ ರಾಣಿಯನ್ನು ಬೆಳೆಸುವ ಸಂದರ್ಭದಲ್ಲಿ ಕಡಲೆಕಾಯಿ ಆಕಾರದ ರಾಣಿಕಣಗಳು ಎರಿಗಳ ಕೆಳಭಾಗದಲ್ಲಿ ಕಂಡುಬರುತ್ತವೆ.
ಜೇನುನೊಣಗಳ ವಿಧಗಳು :
ಜೇನುನೊಣಗಳಲ್ಲಿ ಹೆಚ್ಚೇನು, ಕೋಲ್ವೇನು, ತುಡುವೆ ಜೇನು, ಯುರೋಪಿಯನ್ ಜೇನು, ಮುಜೆಂಟಿ ಜೇನು ಇತ್ಯಾದಿ ವಿಧಗಳಿದ್ದು, ಇವುಗಳಲ್ಲಿ ಸ್ಥಳೀಯ ತುಡುವೆ ಜೇನು ಹಾಗೂ ವಿದೇಶದಿಂದ ತರಿಸಿಕೊಂಡಿರುವ ಯುರೋಪಿಯನ್ ಜೇನು ನೊಣಗಳು ಮಾತ್ರ ಸಾಕಣೆಗೆ ಯೋಗ್ಯವಾಗಿವೆ.
ಜೇನು ಕೃಷಿ ಪ್ರಾರಂಭಿಸುವುದು :
ಜೇನು ಕೃಷಿ ಪ್ರಾರಂಭಿಸುವ ಮೊದಲು, ಜೇನುಕುಟುಂಬಗಳ ಸ್ವಭಾವ, ಅವುಗಳ ಜೀವನಕ್ರಮ, ವಿವಿಧಉಪಕರಣಗಳು, ಉಪಯುಕ್ತ ಸಸ್ಯಗಳು ಇವುಗಳೆಲ್ಲದರ ಬಗ್ಗೆ ತಿಳುವಳಿಕೆ ಪಡೆದುಕೊಳ್ಳಬೇಕು. ಜೇನು ಕುಟುಂಬವನ್ನು ಇರಿಸಿರುವ ಸ್ಥಳದ ಒಂದು- ಒಂದೂವರೆ ಕಿ.ಮೀ. ಸುತ್ತಳತೆಯಲ್ಲಿ ಜೇನುನೊಣಗಳಿಗೆ ಆಹಾರವನ್ನು ಒದಗಿಸಬಲ್ಲ ಸಸ್ಯ ಸಂಪತ್ತಿರುವಂತಹ ಯಾವುದೇ ಸ್ಥಳ ಜೇನುಕೃಷಿಗೆ ಸೂಕ್ತವಾಗಿರುತ್ತದೆ. ಜೇನು ಕೃಷಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗುವ ಸಲಕರಣೆಗಳೆಂದರೆ, ಜೇನುಪೆಟ್ಟಿಗೆ, ರಾಣಿ ತಡೆಗೇಟು, ಹೊಗೆತಿದೆ, ಮುಖಪರದೆ ಹೈವ್ ಟೂಲ್ ಹಾಗೂ ಜೇನುತುಪ್ಪ ತೆಗೆಯುವಯಂತ್ರ, ಜೇನುಕುಟುಂಬಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಾನಗಳಾದ ಮರದ ಪೊಟರೆ, ಹುತ್ತದ ಕೋವೆ ಇತ್ಯಾದಿಗಳಲ್ಲಿ ಇರುವುದನ್ನು ಪತ್ತೆ ಮಾಡಿ ಪೆಟ್ಟೆಗೆಗೆ ತುಂಬಿಸಿಕೊಳ್ಳಬಹುದು ಅಥವಾ ಬೇರೆ ಜೇನು ಕೃಷಿಕರಿಂದ ಕುಟುಂಬಗಳನ್ನು ಖರೀದಿಸಿ ಪಡೆಯಬಹುದು. ಬೆಳಗಿನ ಎಳೆಬಿಸಿಲಿನಲ್ಲಿ ಜೇನುನೊಣಗಳು ತಮ್ಮ ಚಟುವಟಿಕೆಯಲ್ಲಿ ತೊಡಗಿ ಗೂಡಿನಿಂದ ಹೊರಹೋಗುವುದನ್ನು ಹಾಗೂ ಒಳಬರುವುದನ್ನು ಗಮನಿಸಿ ಸ್ವಾಭಾವಿಕ ವಾಸಸ್ಥಾನವನ್ನು ಪತ್ತೆ ಮಾಡಬಹುದು.ಅನಂತರ ಅಲ್ಲಿಂದ ಎರಿಗಳನ್ನು ಒಂದೊಂದಾಗಿ ಹೊರತೆಗೆದು, ಪೆಟ್ಟಿಗೆಯ ಚೌಕಟ್ಟಿಗೆ ಸೂಕ್ತವಾಗಿ ಹೊಂದುವಂತೆ ಕತ್ತರಿಸಿ, ಬಾಳೆನಾರಿನಿಂದ ಕಟ್ಟಿ ಪೆಟ್ಟಿಗೆಯಲ್ಲಿರಿಸಬೇಕು. ರಾಣಿನೊಣದ ಸಮೇತ ಎಲ್ಲಾ ನೊಣಗಳನ್ನು ಪೆಟ್ಟಿಗೆಗೆ ವರ್ಗಾಯಿಸಿ, ರಾಣಿ ತಡಗೇಟನ್ನು ಅಳವಡಿಸಿ, ಕತ್ತಲಾಗುವವರೆಗೆ ಅದೇ ಸ್ಥಳದಲ್ಲಿ ಬಿಟ್ಟಿದ್ದು, ನಂತರ ನಮಗೆ ಬೇಕಾದ ಸ್ಥಳಕ್ಕೆ ಸಾಗಿಸಿ ಇಡಬೇಕು. ಹೊಸ ಪರಿಸರಕ್ಕೆ ಕುಟುಂಬವು ಹೊಂದಿಕೊಳ್ಳುವವರೆಗೆ (ಕನಿಷ್ಠ ಒಂದು ವಾರದವರೆಗೆ) ಅದಕ್ಕೆ ಸಕ್ಕರೆ ಪಾಕವನ್ನು ಕೊಡುತ್ತಿರಬೇಕು.
ಜೇನು ಕುಟುಂಬದ ನಿರ್ವಹಣೆ :
ಜೇನು ಕುಟುಂಬಗಳನ್ನು ವಾರಕ್ಕೊಮ್ಮೆ ಪರೀಕ್ಷಿಸುತ್ತಿದ್ದು, ಅಡಿ ಹಲಗೆಯನ್ನು 10-12 ದಿನಗಳಿಗೊಮ್ಮೆ ಸ್ವಚ್ಛಗೊಳಿಸುತ್ತಿರಬೇಕು. ಕುಟುಂಬದಲ್ಲಿ ಹುಳುಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ, ಮೇಣದ ಹಾಳೆಯನ್ನು ಹೊಂದಿರುವ ಚೌಕಟ್ಟುಗಳನ್ನು ಕೊಡುತ್ತಾ ಹೋಗಬೇಕು. ಪೆಟ್ಟೆಗೆಯು (ಸಂಸಾರ ಕೋಣೆ) ಸಂಪೂರ್ಣ ತುಂಬಿದಾಗ (ಜೇನು ಸುಗ್ಗಿಯ ಕಾಲದಲ್ಲಿ), ಮೇಲುಭಾಗ (ತುಪ್ಪದ ಕೋಣೆ) ವನ್ನು ಇರಿಸಬೇಕು. ಜೇನುಕೋಣೆಯನ್ನು ಗಮನಿಸುತ್ತಿದ್ದು, ಅದರಲ್ಲಿನ ಕನಿಷ್ಠ ಶೇ.70 ರಷ್ಟು ಕಣಗಳು, ಜೇನಿನಿಂದ ಭರ್ತಿಯಾಗಿ ಮುಚ್ಚಲ್ಪಟ್ಟಾಗ, ಅದು ಜೇನು ತೆಗೆಯಲು ಸಕಾಲವಾಗಿರುತ್ತದೆ. ಆ ಸಂದರ್ಭದಲ್ಲಿ ಜೇನು ಕೋಣೆಯ ಎರಿಗಳನ್ನು ಒಂದೊಂದಾಗಿ ಹೊರತೆಗೆದು ಹುಳುಗಳನ್ನು ಕೊಡವಿ, ಕಣಗಳ ಮುಚ್ಚಳವನ್ನು ಹರಿತವಾದ ಚಾಕುವಿನಿಂದ ತೆಗೆದು, ಜೇನು ತೆಗೆಯುವ ಯಂತ್ರದೊಳಗೆ ಎರಿಯನ್ನು ಇಟ್ಟು, ತುಪ್ಪವನ್ನು ಬೇರ್ಪಡಿಸಿಕೊಳ್ಳಬೇಕು. ಹೀಗೆ ಖಾಲಿ ಮಾಡಿದ ಎರಿಗಳನ್ನು ಪುನ: ಪೆಟ್ಟಿಗೆಯೊಳಗೆ ಇರಿಸಬೇಕು. ಸುಗ್ಗಿಯ ಕಾಲದಲ್ಲಿ 15-20 ದಿನಗಳಿಗೊಮ್ಮೆ ಈ ರೀತಿ ತುಪ್ಪವನ್ನು ತೆಗೆಯಬಹುದು.
ಸುಗ್ಗಿಯ ನಂತರ, ಸಾಮನ್ಯವಾಗಿ ಕುಟುಂಬದಲ್ಲಿ ಹುಳುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಂದರ್ಭದಲ್ಲಿ, ಖಾಲಿ ಎರಿಗಳು ಕಂಡು ಬಂದಾಗ, ಅಂತಹ ಎರಿಗಳನ್ನು ತೆಗೆದುಹಾಕಬೇಕು. ಆಹಾರದ ಅಭಾವ ಉಂಟಾದಾಗ ಜೇನುಕುಟುಂಬಕ್ಕೆ ಸಕ್ಕರೆ ಪಾಕವನ್ನು ಒದಗಿಸುತ್ತಿರಬೇಕು.ಕಾರಣಾಂತರದಿಂದ ರಾಣಿ ಇಲ್ಲದೇ ಹೋದಲ್ಲಿ, ಬೇರೆ ಕುಟುಂಬದಿಂದ ರಾಣಿಕಣಗಳು ಲಭ್ಯವಿದ್ದಲ್ಲಿ, ಅವುಗಳನ್ನು ಕತ್ತರಿಸಿ ತಂದು ಕೊಡಬೇಕು ಅಥವಾ ರಾಣಿ ಇಲ್ಲದ ಕುಟಂಬವನ್ನು ಇನ್ನೊಂದು ರಾಣಿಯಿರುವ ಕುಟುಂಬದೊಡನೆ ಒಂದು ಗೂಡಿಸಬೇಕು.
ಕುಟುಂಬವು ಪಾಲಾಗುವ ಲಕ್ಷಣಗಳು ಕಂಡುಬರುವಾಗ ಕುಟಂಬವನ್ನು 4-5 ದಿನಗಳಿಗೊಮ್ಮೆ ಪರೀಕ್ಷಿಸುತ್ತಿದ್ದು, ಹೊರರಾಣಿಕಣಗಳೇನಾದರೂ ಇದ್ದಲ್ಲಿ, ಅವುಗಳನ್ನು ಕಿತ್ತು ಹಾಕಬೇಕು.
ಕೀಟ ಮತ್ತು ರೋಗ ಬಾಧೆ :
ಜೇನು ನೊಣಗಳ ಪ್ರಮುಖವಾದ ಶತ್ರುಗಳೆಂದರೆ, ಮೇಣದ ಪತಂಗ, ಇರುವೆಗಳು, ನುಸಿಗಳು ಇತ್ಯಾದಿ. ಅಡಿ ಹಲಗೆಯನ್ನು ಆಗಾಗ ಸ್ವಚ್ಛಗೊಳಿಸುತ್ತಿದ್ದು, ಪೆಟ್ಟಿಗೆಯಲ್ಲಿ ಬಿರುಕುಗಳಿಗಲ್ಲದಂತೆ ನೋಡಿಕೊಂಡು, ನೊಣಗಳಿಂದಾವೃತವಾಗದ ಎರಿಗಳನ್ನು ತೆಗೆದುಹಾಕುವುದರ ಮುಖಾಂತರ ಮೇಣದ ಪತಂಗವನ್ನು ಸುಲಭವಾಗಿ ನಿರ್ವಹಿಸಬಹುದು. ಇರುವೆಗಳ ಬಾಧೆ, ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜೇನುಧಾಮದ ಸುತ್ತಲಿನಲ್ಲಿ ಕಂಡುಬರುವ ಇರುವೆ ಗೂಡುಗಳನ್ನು ನಾಶಪಡಿಸುವುದು, ಪೆಟ್ಟೆಗೆಯನ್ನು ಒಂದು ಸ್ಟ್ಯಾಂಡಿನ ಮೇಲಿರಿಸಿ ಕೆಳಗೆ ಇರುವೆ ಬಾರದಂತೆ ನೀರನ್ನು ಇರಿಸುವುದರ ಮುಖಾಂತರ ಇವುಗಳ ಬಾಧೆಯನ್ನು ತಡೆಯಬಹುದು.
ರೋಗಗಳಲ್ಲಿ, ಥೈಸಾಕ್ ಬ್ರೂಡ್ ನಂಜುರೋಗ ಪ್ರಮುಖವಾಗಿದ್ದು, ರೋಗಲಕ್ಷಣ ಕಾಣಿಸಿಕೊಂಡ ಹೊಸದರಲ್ಲಿಯೇ ರಾಣಿಯನ್ನು 10 ದಿನಗಳ ಕಾಲ ಪಂಜರದೊಳಗೆ ಇರಿಸುವುದರ ಮುಖಾಂತರ ರೋಗಬಾಧೆಯನ್ನು ತಡೆಯಬಹುದು.
ಇಳುವರಿ ಮತ್ತು ಜೇನು ಕೃಷಿ ಆರ್ಥಿಕತೆ :
ಪ್ರತಿ ಕುಟುಂಬದಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ಜೇನಿನ ಇಳುವರಿ 8-25 ಕಿ. ಗ್ರಾಂ ತುಡುವೆ ಜೇನಿನಿಂದ ಹಾಗೂ 30-35 ಕಿ.ಗ್ರಾಂ. ಯುರೋಪಿಯನ್ ಜೇನಿನಿಂದ ದೊರೆಯುತ್ತದೆ. ಸ್ಥಳೀಯವಾಗಿ ಲಭ್ಯವಿರುವ ಜೇನುಪೆಟ್ಟಿಗೆ ಮತ್ತು ಪ್ರತಿ ಜೇನು ಕುಟುಂಬಕ್ಕೆ ಮೊದಲನೆಯ ವರ್ಷ ಸುಮಾರು 800-900 ರೂ. ಖರ್ಚಾಗಿ ಮುಂಬರುವ ವರ್ಷಗಳಲ್ಲಿ ನಿರ್ವಹಣೆಯ ಖರ್ಚು ಕೇವಲ 70-80 ರೂ ಮಾತ್ರ. ವ್ಯವಸ್ಥಿತವಾಗಿ ಕುಟುಂಬಗಳನ್ನು ನೋಡಿಕೊಂಡಲ್ಲಿ, ಪ್ರತಿ ಕುಟುಂಬದಿಂದ, ಬಯಲು ಮತ್ತು ಮಲೆನಾಡು ಪ್ರದೇಶಗಳಲ್ಲಿ ಸರಾಸರಿ 15-20 ಕಿ.ಗ್ರಾಂ. ಜೇನುತುಪ್ಪವನ್ನು ಪ್ರತಿ ವರ್ಷ ಪಡೆದು ರೂ 800-2000 ರ ವರೆಗೆ ನಿವ್ವಳ ಆದಾಯ ಪಡೆಯಬಹುದು, ಅಲ್ಲದೆ ಬೆಳೆಗಳ ಇಳುವರಿಯೂ ಸಹ ಜೇನುನೊಣಗಳ ಪರಾಗಸ್ಪರ್ಶದಿಂದಾಗಿ ಗಮನಾರ್ಹವಾಗಿ ಹೆಚ್ಚಾಗುತ್ತದೆ.
ಜೇನುಕೃಷಿಯಿಂದ ರೈತರಿಗೆ ಹೆಚ್ಚು ಲಾಭ :
ಜೇನು ನೊಣಗಳು ಪರಾಗಸ್ಪರ್ಶದ ಮೂಲಕ ನಮ್ಮ ಹಲವಾರು ಬೆಳೆಗಳಲ್ಲಿ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿ, ಪರೋಕ್ಷವಾಗಿ ರೈತರ ಆದಾಯವನ್ನು ಹೆಚ್ಚಿಸುತ್ತವೆ. ಜೇನುನೋಣಗಳ ಉಪಸ್ಥಿತಿಯಿಂದಾಗಿ ವಿವಿಧ ಇಳುವರಿಯು ಶೇಕಡಾವಾರು 20 ರಿಂದ 100 ರವರೆಗೆ ಹೆಚ್ಚಾಗುವುದು ದೃಢಪಟ್ಟಿದೆ. ವಿವಿಧ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಮಾವು, ಸೇಬು, ಸೀಬೆ, ಏಲಕ್ಕಿ, ನಿಂಬ, ಹಾಗೂ ತರಕಾರಿ ಬೆಳೆಗಳಾದ ಟೊಮ್ಯಾಟೊ, ಸೀಮೆಬದನೆ, ಸೌತೆ, ಕುಂಬಳ, ಹಾಗಲ, ಹೂವಿನ ಬೆಳೆಗಳು, ಔಷಧಿ ಹಾಗೂ ಸುಗಂಧ ದ್ರವ್ಯ ಬೆಳೆಗಳು, ಇವುಗಳೆಲ್ಲವೂ ಜೇನುನೊಣಗಳ ಪರಾಗಸ್ಪರ್ಶದಿಂದ ಪ್ರಯೋಜನ ಹೊಂದುವ ಕೆಲವು ಉದಾಹರಣೆಗಳು, ಜೇನುನೊಣಗಳ ಪರಾಗಸ್ಪರ್ಶದಿಂದ ಬೆಳೆಗಳ ಇಳುವರಿಯ ಹೆಚ್ಚಳದಿಂದಾಗುವ ಲಾಭವನ್ನು ರೈತರು ಗಣನೆಗೆ ತೆಗೆದುಕೊಂಡಲ್ಲಿ, ಅದು ಜೇನುಕುಟುಂಬದಿಂದ ದೊರೆಯಬಹುದಾದ ಎಲ್ಲಾ ಉತ್ಪನ್ನಗಳ ಒಟ್ಟು ಬೆಲೆಯ ಸುಮಾರು 20 ಪಟ್ಟಿಗಿಂತಲೂ ಅಧಿಕವಾಗಿರುತ್ತದೆ. ಜೇನು ಕೃಷಿ ಆರಂಭಿಸುವುದರಿಂದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭಗಳಿಸಬಹುದು.
ಪ್ರತಿಯೊಬ್ಬ ರೈತರ ತೋಟಗಳಲ್ಲಿ ಒಂದೆರಡು ಜೇನುಕುಟುಂಬಗಳನ್ನು ಇಡುವದರಿಂದ ಪರಿಸರದಲ್ಲಿ ಹಲವಾರು ಪರಾಗಸ್ಪರ್ಶ ಕ್ರಿಯೆಗಳು ಸರಳವಾಗಿ ನಡೆದು ಜೀವ ವೈವಿಧ್ಯತೆಯನ್ನು ಕಾಪಾಡಲು ಅನುಕೂಲವಾಗುತ್ತದೆ.
Reference - Package of Practices, Bagalkot
.png)
0 Comments