ಶುದ್ಧ ಹಾಲು ಎಂದರೇನು?

ಆರೋಗ್ಯದಿಂದಿರುವ ದನದ ಸ್ವಚ್ಛ ಕೆಚ್ಚಲಿನಿಂದ ಕರೆದ ಹಾಲನ್ನು "ಶುದ್ಧ ಹಾಲು" ಎಂದು ಕರೆಯಬಹುದು. ಅದಲ್ಲದೇ, ಹಾಲಿನಲ್ಲಿ ಸಹಜವಾಗಿರಬೇಕಾದ ಶರ್ಕರಪಿಷ್ಟ. ಸಸಾರಜನಕ, ಮೇದಸ್ಸು, ವಿಟಮಿನ್, ಲವಣಾಂಶ, ನೀರು ಇತ್ಯಾದಿ ಪೋಷಕಾಂಶಗಳನ್ನು ಹೊರತುಪಡಿಸಿ ಬೇರಾವುದೇ ತರಹದ ಬಾಹ್ಯ ವಸ್ತುಗಳು ಉದಾಹರಣೆಗೆ ಕಲ್ಮಶಗಳು, ರಸಾಯನಿಕ ಪದಾರ್ಥಗಳು, ಹಾನಿಕಾರಕ ಸೂಕ್ಷ್ಮಾಣು ಜೀವಿಗಳು ಇತ್ಯಾದಿ ಇರದೇ ಇದ್ದಲ್ಲಿ, ಅಂತಹ ಹಾಲನ್ನು ಶುದ್ಧ ಹಾಲೆಂದು ಪರಿಗಣಿಸಬಹುದು.

ಶುದ್ಧ ಹಾಲಿನ ಉತ್ಪಾದನೆಯ ಮಹತ್ವ

೧. ಶುದ್ಧ ಹಾಲು ಬೇಗನೆ ಕೆಡುವುದಿಲ್ಲ ಮತ್ತು ಹವಾಮಾನಕ್ಕನುಗುಣವಾಗಿ ೪-೬ ತಾಸಿನವರೆಗೆ ಮೂಲ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ.

೨. ಶುದ್ಧ ಹಾಲು ಉತ್ತಮ ಸಂಸ್ಕರಣೆಯ ಗುಣಗಳನ್ನು ಹೊಂದಿರುತ್ತದೆ. ಹೀಗಾಗಿ ಅದರಿಂದ ತಯಾರಿಸುವಂತಹ ಉತ್ಪನ್ನಗಳು ಹೆಚ್ಚಿನ ಗುಣಮಟ್ಟವನ್ನು ಹೊಂದಿರುತ್ತವೆ.

೩. ಶುದ್ಧ ಹಾಲಿನ ಸೇವನೆ ದೇಹದ ಆರೋಗ್ಯವನ್ನು ಕಾಪಾಡುತ್ತದೆ.

ಹಾಲು ರೋಗಾಣುಯುಕ್ತವಾಗುವ ಬಗೆ

೧. ರೋಗವಿರುವ ದನಗಳಿಂದ ರೋಗಾಣುಗಳು ಹಾಲಿನಲ್ಲಿ ಸೇರಲ್ಪಡುತ್ತವೆ.

 ಉದಾ: ಕ್ಷಯರೋಗ, ಬ್ರುಸೆಲ್ಲೋಸಿಸ್, ಕ್ಯೂ-ಜ್ವರ ಇತ್ಯಾದಿ.

೨. ರೋಗವಿರುವ ಮನುಷ್ಯನಿಂದ ರೋಗಾಣುಗಳು ಹಾಲಿಗೆ ಸೇರಲ್ಪಡುತ್ತವೆ. ಉದಾ: ವಿಷಮ ಶೀತ ಜ್ವರ, ವಾಂತಿ ಬೇಧಿ ಗಂಟಲು ಬೇನೆ ಇತ್ಯಾದಿ.

೩. ಮನುಷ್ಯನಿಂದ ಆಕಳುಗಳಿಗೆ ನಂತರ ಆಕಳಿನಿಂದ ಹಾಲಿಗೆ ರೋಗಾಣುಗಳು ಸೇರಲ್ಪಡುತ್ತವೆ. ಉದಾ: ಸ್ಟಾಫ್ ಆರಿಯಸ್ ಕಾಯಿಲೆ, ಟೈಫಾಯಿಡ್, ಕ್ಷಯರೋಗ ಇತ್ಯಾದಿ.

೪. ಸ್ವಚ್ಛವಿರದ ಆಕಳುಗಳ ದೇಹ, ಕೆಚ್ಚಲು, ಮೂತಿ ಇತ್ಯಾದಿಗಳಿಂದ ಹಾಲು ರೋಗಯುಕ್ತವಾಗುವುದು

೫. ಸ್ವಚ್ಛವಿರದ ಉಪಕರಣಗಳಿಂದ

ಹಾಲು ಕಲ್ಮಶ ಹಾಗೂ ವಿಷಯುಕ್ತವಾಗುವ ಬಗೆ

೧. ಕೀಟನಾಶಕಗಳ ಬಳಕೆಯಿಂದ (ಕೃಷಿ ಅಥವಾ ಕೃಷಿ ಸಂಬಂಧದ ಕೆಲಸಗಳಿಗೆ)

೨. ಚಿಕಿತ್ಸೆಗಾಗಿ ಅಥವಾ ಬೆಳವಣಿಗೆಗಾಗಿ ಕೊಡುವ ಔಷಧಿಗಳಿಂದ (ದೇಹದಿಂದ ಹೊರಹಾಕಲ್ಪಡುವ ಮೊದಲೇ ಹಾಲು ಹಿಂಡಿ ಉಪಯೋಗಿಸುವುದರಿಂದ).

೩. ಕಲುಷಿತ ಪರಿಸರದಿಂದ ಹಾಗೂ ಅಶುದ್ಧ ನೀರಿನ ಬಳಕೆಯಿಂದ

ಶುದ್ಧ ಹಾಲನ್ನು ಉತ್ಪಾದಿಸುವ ವಿಧಾನ

ಶುದ್ಧ ಹಾಲನ್ನು ಉತ್ಪಾದಿಸುವಾಗ ಕೆಳಕಂಡ ಅಂಶಗಳ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಈ ಮೊದಲೇ ತಿಳಿಸಿದಂತೆ, ಶುದ್ಧ ಹಾಲಿನ ಉತ್ಪಾದನೆಯನ್ನು ವಿವಿಧ ಹಂತಗಳಲ್ಲಿ ಅಳವಡಿಸಿಕೊಳ್ಳುವ ಸ್ವಚ್ಛತಾ ಪದ್ಧತಿಗಳೇ ಅತ್ಯಂತ ಪ್ರಮುಖ ಹಾಗೂ ಮಹತ್ವದ್ದಾಗಿವೆ.

೧. ಹಾಲನ್ನು ಯಾವಾಗಲೂ ಆರೋಗ್ಯವಂತ ಜಾನುವಾರುಗಳಿಂದಲೇ ಪಡೆಯಬೇಕು. ಇದಕ್ಕಾಗಿ ಆರೋಗ್ಯವಂತ ಜಾನುವಾರುಗಳ ಚಟುವಟಿಕೆ ಮತ್ತು ಇತರ ಸಂಪೂರ್ಣ ವಿಷಯಗಳ ಜ್ಞಾನ ಅವಶ್ಯಕ.

೨. ಆರೋಗ್ಯವಂತ ಜಾನುವಾರು ಹಾನಿಕಾರಕ ಹಾಗೂ ರೋಗಾಣು ಮುಕ್ತ ಹಾಲನ್ನು ಸದಾ ನೀಡುತ್ತದೆಯೇ ಎಂಬುದನ್ನು ಅರಿಯಲು ಆಗಾಗ ಪರೀಕ್ಷೆಗೆ ಒಳಪಡಿಸಬೇಕು (ಅಲ್ಪ ಪ್ರಮಾಣದ ಕೆಚ್ಚಲು ಬಾವು ರೋಗ ಇತ್ಯಾದಿ).

೩. ಹಾಲು ಕರೆಯುವ ಮುನ್ನ ಆಕಳಿನ/ಎಮ್ಮೆಯ ಕೆಚ್ಚಲು, ಮೊಲೆ ಮತ್ತು ದೇಹದ ಹಿಂಭಾಗ, ಬಾಲವನ್ನು ಸ್ವಚ್ಚವಾಗಿಡಬೇಕು. ಕೆಚ್ಚಲನ್ನು ಬೆಚ್ಚಗಿನ ನೀರಿನಲ್ಲಿ ತೊಳೆದು ಒಣ ಬಟ್ಟೆಯಿಂದ ಒರೆಸಬೇಕು. ಹಿಂಡುವ ಸಮಯ ಕಡಿಮೆಯಾಗಿದ್ದು, ಪೂರ್ಣ ಹಾಲನ್ನು ಹಿಂಡಬೇಕು.

೪. ಹಾಲನ್ನು ಸಂಗ್ರಹಿಸುವಾಗ, ಹಿಂಡುವಾಗ ಬಳಸುವ ಪಾತ್ರೆಗಳನ್ನು, ಕ್ಯಾನುಗಳನ್ನು ತೊಳೆಯುವ ಸೋಡ ಅಥವಾ ಇತರೆ ಶುಚಿ ಮಾಡುವ ರಾಸಾಯನಿಕ ಪುಡಿಗಳಿಂದ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು.

೫. ಹಾಲು ಹಿಂಡುವ ವ್ಯಕ್ತಿಯು ಆರೋಗ್ಯವಂತನಾಗಿರುವಂತೆ ಗಮನ ಹರಿಸಬೇಕು. ಕೆಲಸಗಾರರು ಹಾಲು ಕರೆಯುವಾಗ ಸೀನುವುದು, ಕೆಮ್ಮುವದು, ಉಗುಳುವದು, ತಂಬಾಕು ಸೇವನೆ ಮತ್ತು ಧೂಮಪಾನ ಇತ್ಯಾದಿಗಳನ್ನು ಮಾಡಬಾರದು. ಕೈಯಲ್ಲಿ ಉಗುರುಗಳಿರಬಾರದು ಹಾಗೂ ತಲೆಗೆ ಬಟ್ಟೆ ಕಟ್ಟಿರಬೇಕು.

೬ ಆಕಳ ಮನೆ ಮತ್ತು ಸುತ್ತಲಿನ ಪರಿಸರ ಚೊಕ್ಕಟವಾಗಿರುವಂತೆ ಗಮನ ವಹಿಸಬೇಕು.

೭ ಶುದ್ಧವಾದ ನೀರನ್ನು ಬಳಸಬೇಕು.

೮. ಸಾಧ್ಯವಾದರೆ ಹಾಲನ್ನು ತಡಮಾಡದೆ ತಕ್ಷಣ ಮಾರಾಟ ಮಾಡಬೇಕು ಇಲ್ಲವೇ ಶೈತ್ಯಾಗಾರದಲ್ಲಿ ಇಡಬೇಕು.

೯. ಹಾಲು ಹಿಂಡಿದ ನಂತರ ಕೆಚ್ಚಲನ್ನು ಬೆಚ್ಚಗಿನ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಬೇಕು.


Reference  - Package of Practices, UAS Dharwad