ನಮ್ಮಲ್ಲಿ ಬಳಕೆಯಲ್ಲಿರುವ ಜವಾರಿ ಎಮ್ಮೆಗಳು ಬಹಳ ಕಡಿಮೆ ಪ್ರಮಾಣದಲ್ಲಿ ಹಾಲು ಕೊಡುತ್ತವೆ. ಮಣಕಗಳು ಸಾಧಾರಣವಾಗಿ ೪.೫ ಯಿಂದ ೫ ವರ್ಷ ವಯಸ್ಸಿಗೆ ಮೊದಲನೇ ಕರು ಹಾಕುತ್ತವೆ ಮತ್ತು ಕರಾವಿನ ಅಂತರ ಸುಮಾರು ೨ ರಿಂದ ೨.೫ ವರ್ಷ ಇರುವುದು. ಹೀಗಾಗಿ ಒಂದು ಎಮ್ಮೆ ತನ್ನ ಜೀವಮಾನದಲ್ಲಿ ಕಡಿಮೆ ಕರುಗಳನ್ನು ಕೊಡುತ್ತದೆ. ಅಲ್ಲದೇ ಸೂಲಿನ ಹಾಲು ಉತ್ಪಾದನೆ ೫೦೦ ರಿಂದ ೮೦೦ ಕಿ.ಗ್ರಾಂ ಇರುತ್ತದೆ. ಇಂತಹ ಜವಾರಿ ಎಮ್ಮೆಗಳ ಹಾಲು ಉತ್ಪಾದನೆ ಶಕ್ತಿ ಹೆಚ್ಚಿಸಲು ಹೆಚ್ಚು ಹಾಲು ಕೊಡುವಂತಹ ಸ್ವದೇಶಿ ತಳಿಯಾದ ಸೂರ್ತಿ / ಮುರ್ರಾ ಕೋಣದ ವೀರದಿಂದ ಕೃತಕ ಗರ್ಭಧಾರಣೆ ಮಾಡಿಸಬೇಕು. ಅತಿ ಹೆಚ್ಚು ಹಾಲು ಉತ್ಪಾದಿಸುವ ಸೂರ್ತಿ/ಮುರಾ ಎಮ್ಮೆಗಳಲ್ಲಿ ಜನಿಸಿದ ಕೋಣಗಳ ವೀರದಿಂದ ಜವಾರಿ ಎಮ್ಮೆಗಳಿಗೆ ಗರ್ಭಕಟ್ಟಿಸಿದಾಗ ಮುಂದಿನ ಪೀಳಿಗೆಯ ಎಮ್ಮೆಗಳು ಪ್ರತಿ ಸೂಲಿನಲ್ಲಿ ಹೆಚ್ಚು ಹಾಲು ಉತ್ಪಾದಿಸುವ ಸಾಮರ್ಥ್ಯ ಪಡೆಯುತ್ತವೆ. ಅಲ್ಲದೇ ತನ್ನ ಜೀವಮಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರುಗಳನ್ನು ಕೊಡುತ್ತವೆ.