ಬೇಸಿಗೆಯ ಬಿಸಿಲು ಏರಿದಂತೆ ಎಮ್ಮೆಗಳು ನೀರು ನಿಲ್ಲುವ ಸ್ಥಳದಲ್ಲಿ ಈಜಾಡಿ ಹೊರಳಾಡುವುದು ಸರ್ವೆಸಾಮಾನ್ಯ. ಹಸುಗಳಂತೆ ಎಮ್ಮೆಗಳಿಗೆ ಬಿಸಿಲಿನ ತಾಪ ತಡೆಯುವುದು ಸಾಧ್ಯವಾಗದು. ಇಂತಹ ಸಮಯದಲ್ಲಿ ಎಮ್ಮೆಗಳಿಗೆ ವಿಶೇಷ ಕಾಳಜಿ ವಹಿಸುವುದು ಅತಿ ಮುಖ್ಯ. ಇಲ್ಲವಾದಲ್ಲಿ ಅವುಗಳ ಉತ್ಪಾದನಾ ಮಟ್ಟ ತೀರಾ ಕಡಿಮೆಯಾಗುವುದು. ಈ ಕೆಳಗೆ ಕಾಣಿಸಿದ ಅಂಶಗಳನ್ನು ಕೈಕೊಂಡಲ್ಲಿ ಹಾಲು ಉತ್ಪಾದನೆ ಕಡಿಮೆಯಾಗುವುದನ್ನು ತಪ್ಪಿಸಬಹುದು.

೧. ಕುಡಿಯಲು ಸಾಕಷ್ಟು ಸ್ವಚ್ಛವಾದ ಹಾಗೂ ತಂಪಾದ ನೀರು ಕೊಡಬೇಕು.

೨. ಸಾಕಷ್ಟು ಗಿಡಗಳನ್ನು ನೆಟ್ಟು, ಬೆಳೆಸಿ ಇಲ್ಲವೇ ಕೊಟ್ಟಿಗೆಯನ್ನು ನಿರ್ಮಿಸಿ ಎಮ್ಮೆಗಳಿಗೆ ನೆರಳು ಸಿಗುವಂತೆ ಮಾಡಬೇಕು.

೩. ಮಧ್ಯಾಹ್ನ ಬಿಸಿಲು ಹೆಚ್ಚು ಇದ್ದಾಗ ಎಮ್ಮೆಗಳನ್ನು ತಂಪಾದ ಜಾಗದಲ್ಲಿ ಕಟ್ಟುವುದು ಉತ್ತಮ.

೪. ಮಧ್ಯಾಹ್ನದ ಸಮಯದಲ್ಲಿ ಎಮ್ಮೆಗಳನ್ನು ಆದಷ್ಟು ನೀರಿನಲ್ಲಿ (ಕೆರೆ, ಹೊಂಡಗಳಲ್ಲಿ) ಬಿಡುವುದು ಉತ್ತಮ. ಇಲ್ಲವೇ ದಿನಕ್ಕೆ ೨-೩ ಬಾರಿ ತಣ್ಣೀರಿನಿಂದ ಎಮ್ಮೆಗಳ ಮೈ ತೊಳೆಯಬೇಕು. ಇಲ್ಲವೇ ನೀರು ಸಿಂಪಡಿಸಬೇಕು.

೫. ಎಮ್ಮೆಗಳಿಗೆ ಸಾಧ್ಯವಿದ್ದಷ್ಟು ಹಸಿರು ಮೇವು ಅಥವಾ ರಸಮೇವನ್ನು ಕೊಡಬೇಕು. ತಂಪಾದ ವೇಳೆಯಲ್ಲಿ ಅಂದರೆ ಬೆಳಿಗ್ಗೆ, ಸಾಯಂಕಾಲ ಹಾಗೂ ರಾತ್ರಿ ಮೇಯಿಸುವುದು ಉತ್ತಮ.

೬. ಒಂದು ವೇಳೆ ಹೊರಗಡೆ ಮೇಯಲು ಬಿಡುವುದಾದರೆ ತಂಪಾದ ಸಮಯದಲ್ಲಿ ಅಂದರೆ ಬೆಳಿಗ್ಗೆ ಅಥವಾ ಸಾಯಂಕಾಲ ಬಿಡುವುದು ಸೂಕ್ತ. ಉರಿ ಬಿಸಿಲಿರುವಾಗ ಎಮ್ಮೆಗಳು ಹೊಟ್ಟೆ ತುಂಬ ಮೇವು ತಿನ್ನಲಾರವು.

೭. ಬೇಸಿಗೆಯಲ್ಲಿ ಎಮ್ಮೆಗಳು ಸರಿಯಾಗಿ ಬೆದೆಯ ಲಕ್ಷಣ ತೋರಿಸುವದಿಲ್ಲ. ಆದುದರಿಂದ ಬೆದೆ ಲಕ್ಷಣಗಳನ್ನು ರಾತ್ರಿ ಎಮ್ಮೆ ಮಲಗಿದಾಗ (ಕುಳಿತಾಗ) ಗಮನಿಸಿದರೆ ಉತ್ತಮ.


Reference  - Package of Practices, UAS Dharwad