ಸಿಂಧಿ ತಳಿಗೆ ರೆಡ್ ಸಿಂಧಿ ಹಾಗೂ ಕೆಂಪು ಕರಾಚಿ ತಳಿ ಎಂದು ಸಹ ಕರೆಯುತ್ತಾರೆ. ಈ ತಳಿ ಸಿಂದ್ ಪ್ರಾಂತ್ಯ, ಪಂಜಾಬ ಹಾಗೂ ಹರಿಯಾಣಗಳಲ್ಲಿ ಕಂಡುಬರುತ್ತದೆ. ಈ ತಳಿ ಮಧ್ಯಮಗಾತ್ರ ಹೊಂದಿರುತ್ತದೆ. ಈ ದನಗಳು ತುಂಬಾ ಸೌಮ್ಯ ಸ್ವಭಾವ ಹೊಂದಿರುತ್ತವೆ. ಕೋಡುಗಳು ದಪ್ಪವಾಗಿದ್ದು, ತುದಿ ಮೊಂಡವಾಗಿರುತ್ತವೆ. ಚರ್ಮದ ಬಣ್ಣ ಸಾಮಾನ್ಯವಾಗಿ ದಟ್ಟ ಕೆಂಪು. ಹೋರಿಗಳು ಆಕಳಿಗಿಂತ ದಟ್ಟ ವರ್ಣ ಹೊಂದಿರುತ್ತವೆ. ಇಣಿ ಮತ್ತು ಗಂಗೆದೊಗಲು ದೊಡ್ಡದಾಗಿರುತ್ತವೆ. ಆಕಳುಗಳ ಕೆಚ್ಚಲು ದೊಡ್ಡದಾಗಿದ್ದು, ಹೆಚ್ಚು ಹಾಲು ಕೊಡುವ ದನಗಳಲ್ಲಿ ಜೋತಾಡುತ್ತಿರುತ್ತದೆ. ಹೋರಿಗಳು ೪೫೦ ಕಿ. ಗ್ರಾಂ ತೂಗಿದರೆ ಆಕಳುಗಳ ಸರಾಸರಿ ತೂಕ ೩೦೦ ಕಿ. ಗ್ರಾಂ ಇರುವುದು. ಹಾಲಿನ ಇಳುವರಿ ಒಂದು ಸೂಲಿಗೆ ಸರಾಸರಿ ೧೫೦೦ ಕಿ. ಗ್ರಾಂ ಇದ್ದು, ೫೪೦೦ ಕಿ. ಗ್ರಾಂ ಹಾಲು ಕೊಡುವ ದನಗಳ ದಾಖಲೆ ಇದೆ. ಸಿಂಧಿ ಜಾತಿಯ ಆಕಳುಗಳನ್ನು ಭಾರತದ ಕರ್ನಾಲ, ಅಲಹಾಬಾದ್, ಹೊಸೂರು, ಬೆಂಗಳೂರು ಮುಂತಾದ ಕಡೆಯ ಫಾರ್ಮಗಳಲ್ಲಿ ನೋಡಬಹುದು.


Reference  - Package of Practices, UAS Dharwad