ಆಕಳುಗಳು ತಕ್ಕ ಮಟ್ಟಿಗೆ ಹಾಲನ್ನು ಉತ್ಪಾದಿಸುತ್ತವೆ ಹಾಗೂ ಉತ್ಕೃಷ್ಟವಾಗಿ ಕೆಲಸ ಮಾಡುವ ಎತ್ತುಗಳನ್ನು ಸಹ ನೀಡುತ್ತವೆ. ಇವುಗಳ ಉದಾಹರಣೆಗಳೆಂದರೆ ದೇವಣಿ, ರೆಡ್ ಖಾಂದಾರಿ, ಓಂಗೋಲ, ಹರಿಯಾಣಾ, ಕಾಂಕ್ರೇಜ ಹಾಗೂ ಕೃಷ್ಣಾ ವ್ಯಾಲಿ ತಳಿಗಳು.
ದೇವಣಿ:
ಈ ತಳಿಗೆ ಡೊಂಗರಿ. ಡೋಂಗರಪಟ್ಟಿ ಎಂದು ಕರೆಯುತ್ತಾರೆ. ಈ ತಳಿಯು ಮಹಾರಾಷ್ಟ್ರದ ಲಾತೂರು ಜಿಲ್ಲೆ, ಕರ್ನಾಟಕದ ಗುಲ್ಬರ್ಗಾ ಹಾಗೂ ಬೀದರ ಜಿಲ್ಲೆಯಲ್ಲಿ ಹಾಗೂ ಆಂಧ್ರದಲ್ಲೂ ಕಾಣಸಿಗುತ್ತವೆ. ಗಿರ್, ಡಾಂಗಿ ಹಾಗೂ ಜವಾರಿ ದನಗಳ ಸಂಕರಣದಿಂದ ಈ ತಳಿ ಕಳೆದೆರಡು ಶತಕಗಳಲ್ಲಿ ಉದ್ಭವಿಸಿದೆ. ಉಬ್ಬಿದ ಹಣೆ, ಚಿಕ್ಕ ಕೋಡು, ಇಳಿಬಿದ್ದ ಉದ್ದ ಕಿವಿಗಳು ಇದರ ಲಕ್ಷಣಗಳು ಮುಖ, ಕಿವಿಯ ಒಳಗಡೆ. ಮೊಲೆಗಳು, ಯೋನಿಯ ಭಾಗ ಹಾಗೂ ವೃಷಣಗಳು ಕಪ್ಪಾಗಿರುತ್ತದೆ. ಆಕಳುಗಳು ೧೦೦೦-೧೨೦೦ ಕಿ. ಗ್ರಾಂ ಹಾಲನ್ನು ಒಂದು ಸೂಲಿನಲ್ಲಿ ಉತ್ಪಾದಿಸಿದರೆ, ಎತ್ತುಗಳು ಉಳುಮೆಗೆ ಶ್ರೇಷ್ಠವಾಗಿವೆ.
ಓಂಗೋಲ:
ಇದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ದೊರೆಯುವ ತಳಿ. ಇದಕ್ಕೆ ನೆಲ್ಲೋರ ತಳಿ ಎಂದೂ ಕರೆಯುತ್ತಾರೆ. ಇದರ ಮೈಬಣ್ಣ ಬಿಳಿ, ತಲೆ ಕುತ್ತಿಗೆ ಹಾಗೂ ಇಣಿಯ ಮೇಲೆ ಕಪ್ಪು ಹಾಗೂ ಬೂದು ಬಣ್ಣದ ಚುಕ್ಕೆಗಳನ್ನು ಕಾಣಬಹುದು. ಒಂದು ಸೂಲದಲ್ಲಿ ೧೦೦೦-೧೨೦೦ ಕಿ. ಗ್ರಾಂ ಹಾಲು ಉತ್ಪಾದಿಸಬಲ್ಲವು. ಎತ್ತುಗಳು ಭಾರವಾದ ಕೆಲಸಕ್ಕೆ ಯೋಗ್ಯವಾಗಿವೆ.
ಹರಿಯಾಣ:
ಈ ತಳಿಯನ್ನು ಹರಿಯಾಣಾ ರಾಜ್ಯದ ಕರ್ನಾಲ, ಹಿಸ್ಸಾರ ಹಾಗೂ ಗುರಗಾಂವ ಜಿಲ್ಲೆಗಳಲ್ಲಿ ಕಾಣಬಹುದು. ಆಕಳುಗಳು ೧೧೦೦ ರಿಂದ ೧೨೦೦ ಕಿ. ಗ್ರಾಂ ಹಾಲು ಉತ್ಪಾದಿಸುತ್ತವೆ. ಮೈಬಣ್ಣ ಬಿಳಿ, ಚಿಕ್ಕ ಕಿವಿಗಳಿರುತ್ತವೆ. ಆಗಲ ಹಣೆ ಇರುತ್ತದೆ. ರಂಟೆ ಹೊಡೆಯಲು ಹಾಗೂ ಚಕ್ಕಡಿ ಎಳೆಯಲು ಅತ್ಯುತ್ತಮ ತಳಿಯಾಗಿದೆ.
ಕಾಂಕ್ರೇಜ್:
ಭಾರತದಲ್ಲೇ ಹೆಚ್ಚಿನ ಮೈತೂಕವುಳ್ಳ ರಾಜಠೀವಿಯ ತಳಿ ಇದರ ನಡಿಗೆಯನ್ನು "ಸವಾಯಿ ಚಾಲ" ಎನ್ನುತ್ತಾರೆ. ಗುಜರಾತಿನ ಕಚ್ಛ ಭಾಗದಲ್ಲಿ ಮುಖ್ಯವಾಗಿ ದೊರೆಯುತ್ತದೆ. ತ್ರಿಕೋನಾಕಾರದ ಮುಖ, ಸುಂದರವಾದ ದಪ್ಪ ಕೋಡುಗಳು ಇದರ ವೈಶಿಷ್ಟ್ಯ, ಒಂದು ಸೂಲದಲ್ಲಿ ೧೨೦೦-೧೩೦೦ ಕಿ. ಗ್ರಾಂ ಹಾಲು ಉತ್ಪಾದಿಸುತ್ತದೆ. ಎತ್ತುಗಳು ಬಲಿಷ್ಠವಾಗಿದ್ದು, ಉತ್ತಮ ಕೆಲಸ ಮಾಡುತ್ತದೆ.
Reference - Package of Practices, UAS Dharwad
0 Comments