ಹಸುಗಳನ್ನು ಕೊಳ್ಳುವಾಗ ಅವುಗಳ ಬಗ್ಗೆ ವಂಶಾವಳಿಗಳ ದಾಖಲೆ ಇದ್ದರೆ ಅದರ ವಂಶದ ಹಾಲಿನ ಉತ್ಪಾದನೆ ಸಾಮರ್ಥ್ಯ ಮತ್ತು ಅವುಗಳ ಹಿಂದಿನ ಸೂಲಿನ ಹಾಲಿನ ಇಳುವರಿಯನ್ನು ಪರಿಶೀಲಿಸಿ ಹೆಚ್ಚು ಹಾಲು ಉತ್ಪಾದನೆಯುಳ್ಳ ವಂಶದ ದನಗಳನ್ನು ಖರೀದಿಸಬೇಕು.
ಗಮನದಲ್ಲಿಡಬೇಕಾದ ಅಂಶಗಳು
೧. ೧-೨ ಸೂಲದೊಳಗಿನ ದನಗಳನ್ನು ಖರೀದಿಸಬೇಕು.
೨. ದನಗಳ ವಯಸ್ಸು ೪-೫ ವರ್ಷದೊಳಗಿರಬೇಕು.
೩. ಹೆಚ್ಚು ಹಾಲು ಕೊಡುವ ಹಸುಗಳು ಸಾಮಾನ್ಯವಾಗಿ ಸೌಮ್ಯ ಸ್ವಭಾವದ್ದಾಗಿರುತ್ತವೆ.
೪. ಮೃದುವಾದ ಕೂದಲು ಮತ್ತು ನುಣುಪಾದ ಚರ್ಮ ಹೊಂದಿರಬೇಕು.
೫. ಕಾಂತಿಯುಕ್ತ ಮತ್ತು ಚುರುಕಾದ ಕಣ್ಣುಗಳು ಇರಬೇಕು
೬. ಹೊಟ್ಟೆ ಮತ್ತು ಎದೆಗುಂಡಿಗೆ ದೊಡ್ಡದಾಗಿರಬೇಕು
೭ ಹಣೆ ಆಗಲವಾಗಿದ್ದು ಕುತ್ತಿಗೆ ಹಾಗೂ ಇಣೆಯ ಭಾಗ ತೆಳುವಾಗಿರಬೇಕು.
೮. ಕೆಚ್ಚಲ ಮೇಲೆ ಮತ್ತು ಕೆಚ್ಚಲ ಮುಂದೆ ಇರುವ ರಕ್ತನಾಳಗಳು ದೊಡ್ಡದಾಗಿದ್ದು, ಅಂಕುಡೊಂಕಾಗಿದ್ದು ಕಣ್ಣಿಗೆ ಎದ್ದು ಕಾಣುವ ಹಾಗೆ ಇರಬೇಕು.
೯. ಕೆಚ್ಚಲು ದೊಡ್ಡದಾಗಿದ್ದು, ಮೃದುವಾಗಿರಬೇಕು. ಹಾಲು ಹಿಂಡಿದ ನಂತರ ಗಾತ್ರದಲ್ಲಿ ಕುಗ್ಗಬೇಕು.
೧೦. ಮಾಲೆ ತೊಟ್ಟುಗಳು ಸಮನಾಗಿದ್ದು, ದೊಡ್ಡದಾಗಿರಬೇಕು.
೧೧. ಎರಡು ಹಿಂಗಾಲುಗಳ ನಡುವಿನ ಅಂತರ ಅಗಲವಾಗಿರಬೇಕು
೧೨. ಪಶುವೈದ್ಯರಿಂದ ಪರೀಕ್ಷಿಸಿ ಆರೋಗ್ಯವಂತ ದನಗಳನ್ನೇ ಖರೀದಿಸಬೇಕು.
೧೩. ಹಸು ಕರು ಹಾಕಿ ೨ ತಿಂಗಳು ಮೀರಿರಬಾರದು
೧೪. ಗರ್ಭಧರಿಸಿದ ಹಸುವನ್ನು ಖರೀದಿಸಬೇಕಾದಲ್ಲಿ ತುಂಬು ಗರ್ಭಿಣಿ ಹಸುವನ್ನು ಮಾತ್ರ ಖರೀದಿಸಬೇಕು.
೧೫. ಗರ್ಭದ ಅವಧಿ ೫ ತಿಂಗಳಿಗಿಂತ ಕಡಿಮೆ ಎಂದು ಮಾರಾಟಗಾರ ಹೇಳಿದರೆ ಪಶುವೈದ್ಯರಿಂದ ಗರ್ಭ ಪರೀಕ್ಷೆ ಮಾಡಿಸಿ, ಖಚಿತ ಪಡಿಸಿಕೊಂಡು ಖರೀದಿಸಬೇಕು.
೧೬. ಹಾಲು ಹಿಂಡದ (ಬರಡು) ಹಸು/ಎಮ್ಮೆಯ ಮೊಲೆಯನ್ನು ಹಿಂಡಿದಲ್ಲಿ ಜಿಡ್ಡಾದ ದ್ರವ ಹೊರಗೆ ಬರುತ್ತದೆ. ಇದು ದನ ಗಬ್ಬ ಇರುವ ಬಗ್ಗೆ ಯಾವುದೇ ಖಚಿತ ಮಾಹಿತಿಯನ್ನು ಕೊಡಲಾರದು.
೧೭. ಒಂದೇ ಸಾರಿ ಹಾಲು ಹಿಂಡಿಸಿ ನೋಡಿ ದನ ಖರೀದಿಸಬಾರದು. ಕನಿಷ್ಟ ಪಕ್ಷ ಮೂರು ಸಾರಿ ಹಾಲು ಹಿಂಡಿಸಿ ನೋಡಿ ದನ ಖರೀದಿಸುವದು ಅತ್ಯುತ್ತಮ.
Reference - Package of Practices, UAS Dharwad
.png)
0 Comments