ಹೈನು ದನಗಳಿಗೆ ವಸತಿ ಕೊಡುವ ಉದ್ದೇಶವೇನೆಂದರೆ, ದನಗಳಿಗೆ ಆರಾಮವನ್ನು ಕಲ್ಪಿಸಿಕೊಟ್ಟು ಅವುಗಳಿಂದ ಪೂರ್ಣ ಹಾಲು ಉತ್ಪಾದನಾ ಸಾಮರ್ಥ್ಯವನ್ನು ಪಡೆಯುವುದಲ್ಲದೇ, ಪ್ರಕೃತಿ ಪ್ರಕೋಪಗಳಿಂದ ಕಾಪಾಡುವದು. ಮನುಷ್ಯರು ವಾಸಿಸುವ ಮನೆಯಿಂದ ಕೊಟ್ಟಿಗೆಯು ಬೇರೆಯಾಗಿರಬೇಕು. ಕೊಟ್ಟಿಗೆಯನ್ನು ನಿರ್ಮಿಸುವಾಗ ಗಮನಿಸಬೇಕಾದ ಅಂಶಗಳು.
೧. ಕೊಟ್ಟಿಗೆಯನ್ನು ಎತ್ತರವಾದ. ಸಮತಟ್ಟಾದ ಸ್ಥಳದಲ್ಲಿ ನಿರ್ಮಿಸಬೇಕು.
೨. ಕಡಿಮೆ ಖರ್ಚಿನಲ್ಲಿ ಸ್ಥಳೀಯವಾಗಿ ಸಿಗುವಂಥ ಸಾಮಗ್ರಿಗಳಿಂದ ಕೊಟ್ಟಿಗೆ ಕಟ್ಟಬೇಕು.
೩. ರಸ್ತೆ ಸೌಲಭ್ಯವಿರಬೇಕು.
೪. ಕೊಟ್ಟಿಗೆಯ ಉದ್ದನೆಯ ಭಾಗ ಪೂರ್ವ-ಪಶ್ಚಿಮ ದಿಕ್ಕಿನಲ್ಲಿದ್ದು, ಕೊಟ್ಟಿಗೆಯಾಳಗೆ ಹಿತ-ಮಿತವಾಗಿ ಶುದ್ಧ ಗಾಳಿ, ಬೆಳಕು ಬರುವಂತಿರಬೇಕು.
೫. ದನಗಳ ಮೂತ್ರ ನೆಲದ ಮೇಲೆ ನಿಲ್ಲದೇ, ಸಲೀಸಾಗಿ ಹರಿದು ಹೋಗುವಂತೆ ಕೊಟ್ಟಿಗೆ ನಿರ್ಮಿಸಬೇಕು.
೬ ಪ್ರತಿಯೊಂದು ದನಕ್ಕೂ ನಿಲ್ಲಲು ಮಲಗಲು ಸಾಕಷ್ಟು ಸ್ಥಳಾವಕಾಶ ಇರಬೇಕು.
೭ ಗೊಬ್ಬರದ ಗುಂಡಿಗಳು ಕೊಟ್ಟಿಗೆಯಿಂದ ಸಮೀಪವಿದ್ದರೆ ಸೆಗಣಿಯನ್ನು ಶ್ರಮವಿಲ್ಲದೆ ಸಾಗಿಸಬಹುದು.
೮. ಹೇರಳವಾಗಿ ಶುದ್ಧ ಕುಡಿಯುವ ನೀರು ಹಾಗೂ ವಿದ್ಯುಚ್ಛಕ್ತಿಯ ಲಭ್ಯತೆಯಿರಬೇಕು.
೯. ಕೊಟ್ಟಿಗೆ ಹತ್ತಿರ ಮೇವು ಬೆಳೆಯುವ ಪ್ರದೇಶ ಇದ್ದರೆ ಮೇವು ಸಾಗಾಟದಲ್ಲಿ ವೇಳೆ, ಹಣ ಮತ್ತು ಶ್ರಮದ ಉಳಿತಾಯವಾಗುವುದು.
೧೦. ಕೊಟ್ಟಿಗೆಯನ್ನು ಯಾವಾಗಲೂ ಸ್ವಚ್ಛವಾಗಿ ಮತ್ತು ಒಣದಾಗಿ ಇಡಬೇಕು.
ಕೊಟ್ಟಿಗೆ ಪ್ರಕಾರಗಳು
ದನದ ಕೊಟ್ಟಿಗೆಯನ್ನು ಮುಖ್ಯವಾಗಿ ಎರಡು ಪದ್ಧತಿಯಲ್ಲಿ ಅಳವಡಿಸಬಹುದು.
೧. ಬಂಧನ ಮುಕ್ತ ಪದ್ಧತಿ
ಈ ಪದ್ಧತಿಯಲ್ಲಿ ದನಗಳನ್ನು ಹಿಂಡುವಾಗ, ಕೃತಕ ಗರ್ಭಧಾರಣೆ ಹಾಗೂ ಔಷಧೋಪಚಾರ ಮಾಡುವಾಗ ಬಿಟ್ಟು ಉಳಿದ ಸಮಯದಲ್ಲಿ ಪೂರ್ತಿ ತಿರುಗಾಡಲಿಕ್ಕೆ ಬಿಡುವುದಾಗಿದೆ. ಈ ಪದ್ಧತಿಯಲ್ಲಿ ದನಗಳ ಸಂಖ್ಯೆಗನುಸಾರವಾಗಿ ಒಂದು ಅಥವಾ ಎರಡು ಬದಿಗೆ ಗೋದಲಿ ಹಾಗೂ ಛಾವಣಿ ಇರಬೇಕು. ಒಂದು ಕಡೆ ನೀರಿನ ತೊಟ್ಟಿ ಹಾಗೂ ಸುತ್ತಲೂ ಬೇಲಿ ಅಥವಾ ಗೋಡೆಯನ್ನು ನಿರ್ಮಿಸಬೇಕು. ಈ ಪದ್ಧತಿಯನ್ನು ಸಾಕಷ್ಟು ಸ್ಥಳಾವಕಾಶವಿದ್ದರೆ ಅನುಸರಿಸಬಹುದು. ಒಂದು ದನಕ್ಕೆ ೭೦-೮೦ ಚದರ ಅಡಿ ಸ್ಥಳ ಬೇಕಾಗುತ್ತದೆ. ಈ ಪದ್ಧತಿಯಲ್ಲಿ ದನಗಳು ತಮಗೆ ಬೇಕಾದಾಗ ಮೇವು ಹಾಗೂ ನೀರು ಪಡೆಯಬಹುದು. ಇದರಲ್ಲಿ ಸಾಕಷ್ಟು ಗಾಳಿ, ಬೆಳಕು ಹಾಗೂ ದನಗಳಿಗೆ ವ್ಯಾಯಾಮ ದೊರೆಯುತ್ತದೆ ಹಾಗೂ ಬೆದೆಗೆ ಬಂದ ದನಗಳನ್ನು ಸುಲಭವಾಗಿ ಗುರುತಿಸಬಹುದು. ಈ ಪದ್ಧತಿಯಲ್ಲಿ ದನಗಳ ಸಂಖ್ಯೆ ಬೆಳೆದಂತೆ ಕೊಟ್ಟಿಗೆಯನ್ನು ವಿಸ್ತರಿಸಲು ಸುಲಭವಾಗುತ್ತದೆ ಹಾಗೂ ಖರ್ಚು ಕಡಿಮೆ ಬರುತ್ತದೆ.
೨. ಮನೆಯಲ್ಲಿ ಕಟ್ಟುವ ಪದ್ದತಿ
ಈ ಪದ್ಧತಿಯಲ್ಲಿ ದನಗಳನ್ನು ಯಾವಾಗಲೂ ಮನೆಯಲ್ಲಿ ಕಟ್ಟಿ ಮೇಯಿಸುವುದು ಹಾಗೂ ದಿನಕ್ಕೆ ೨-೪ ತಾಸು ಮಾತ್ರ ಕೊಟ್ಟಿಗೆಯ ಅವರಣದಲ್ಲಿ ತಿರುಗಾಡಲು ಬಿಡಬೇಕು. ಈ ಪದ್ಧತಿಯನ್ನು ಸ್ವಲ್ಪ ಜಾಗದಲ್ಲಿ ಅಳವಡಿಸಬಹುದು ಹಾಗೂ ಇದರಿಂದ ಖರ್ಚು ಹೆಚ್ಚಿಗೆ ಬರುತ್ತದೆ. ದನಗಳ ಸಂಖ್ಯೆಗನುಗುಣವಾಗಿ
ಒಂದು ಸಾಲಿನಲ್ಲಿ ಅಥವಾ ಎರಡು ಸಾಲಿನಲ್ಲಿ ಕಟ್ಟಬಹುದು. ಎರಡು ಸಾಲಿನಲ್ಲಿ ದನಗಳನ್ನು ಮುಖಾ-ಮುಖಿ ಪದ್ಧತಿಯಲ್ಲಿ ಅಥವಾ ಬಾಲಕ್ಕೆ-ಬಾಲ ಪದ್ಧತಿಯಲ್ಲಿ ಕಟ್ಟಬಹುದು. ಪ್ರತಿಯೊಂದು ಹಸುವಿಗೆ ಸುಮಾರು ೪೦-೫೦ ಚ. ಅಡಿ ಸ್ಥಳ ಬೇಕಾಗುವದು. ಕೊಟ್ಟಿಗೆ ಛಾವಣಿಯ ಮಧ್ಯಭಾಗ ೧೨-೧೫ ಅಡಿ ಎತ್ತರವಿರಬೇಕು ಮತ್ತು ಎರಡೂ ಮಗ್ಗಲೂ ನೆಲದಿಂದ ಛಾವಣಿ ೮-೧೦ ಅಡಿ ಎತ್ತರವಿರಬೇಕು. ಮಗ್ಗುಲಿನ ಗೋಡೆಗಳು ನೆಲದಿಂದ ೪-೫ ಅಡಿ ಎತ್ತರವಿದ್ದು, ಅದರ ಮೇಲೆ ಛಾವಣಿವರೆಗೆ ಜಾಲರಿ ಇರಬೇಕು. ಗೋದಲಿಯ ಎತ್ತರ ಹಸುವಿನ ಕಡೆಗೆ ೨ ಅಡಿ, ಜಾನುವಾರು ನಿಲ್ಲುವ ಜಾಗೆ ೬-೭ ಅಡಿ ಉದ್ದ, ೪-೫ ಅಡಿ ಅಗಲವಿರಬೇಕು, ಮೂತ್ರದ ಕಾಲುವೆ ೯-೧೨ ಅಂಗುಲ ಅಗಲ ಇರಬೇಕು. ಕಟ್ಟಡದ ತಳಪಾಯವನ್ನು ಕಲ್ಲು, ಸಿಮೆಂಟ ಕಾಂಕ್ರೀಟಗಳಿಂದ ನಿರ್ಮಿಸುವುದು ಸೂಕ್ತ. ತಳಪಾಯ ಭೂಮಿಯ ಮಟ್ಟಕ್ಕಿಂತ ಎತ್ತರವಾಗಿರಬೇಕು. ಗೋಡೆ, ಗೋದಲಿಗಳಲ್ಲಿ ಸಂದು, ಬಿರುಕುಗಳಿಲ್ಲದಂತೆ ನೋಡಿಕೊಳ್ಳಬೇಕು. ದನಗಳು ನಿಲ್ಲುವ ಸ್ಥಳವು ಜಾರದಂತಿರಬೇಕು. ನೆಲದ ಮೇಲೆ ಬಿದ್ದ ನೀರು ಹಾಗೂ ಮೂತ್ರ ಸರಾಗವಾಗಿ ಹರಿದು ಹೊರಗೆ ಹೋಗುವಂತೆ ಚರಂಡಿಯ ಕಡೆಗೆ ಸ್ವಲ್ಪ ಇಳಿಜಾರಿರಬೇಕು.
Reference - Package of Practices, UAS Dharwad

0 Comments