ನಮ್ಮ ದೇಶದ ತಳಿಯಾದ ದೇವಣಿ ಹಸುಗಳು ಸಾಧಾರಣವಾಗಿ ಒಂದು ಸೂಲದಲ್ಲಿ ೧೦೦೦-೧೨೦೦ ಕಿ. ಗ್ರಾಂ ಹಾಲು ಕೊಡುತ್ತವೆ. ದೇವಣಿ ತಳಿ ಹಸುಗಳಿಗೆ ಎಚ್.ಎಫ್. ಹೋರಿಗಳ ವೀರ್ಯವನ್ನು ಉಪಯೋಗಿಸಿ ಪಡೆದ ಮಿಶ್ರತಳಿ ಹಸುಗಳಿಗೆ ಎಚ್. ಎಫ್. X ದೇವಣಿ ಮಿಶ್ರತಳಿಗಳು ಎನ್ನುತ್ತಾರೆ. ಈ ಮಿಶ್ರತಳಿ ಹಸುಗಳು ಒಳ್ಳೆಯ ದೇಹದಾಡ್ಯವನ್ನು ಹೊಂದಿದ್ದು, ನಮ್ಮ ಪರಿಸರಕ್ಕೆ ಹಾಗೂ ನಿರ್ವಹಣೆಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಈ ಹಸುಗಳಲ್ಲಿ ಉಳಿದ ಎಚ್.ಎಫ್. ಮಿಶ್ರ ತಳಿಗಳಿಗಿಂತ ರೋಗ ನಿರೋಧಕ ಶಕ್ತಿ ಚೆನ್ನಾಗಿದೆ. ಮಣಕಗಳು ೧೬-೧೮ ತಿಂಗಳುಗಳಿಗೆ ಬೆದೆಗೆ ಬಂದು ಕಟ್ಟಿಕೊಳ್ಳುತ್ತವೆ. ಎಚ್.ಎಫ್.X ದೇವಣಿ ಆಕಳುಗಳು ಒಂದು ಸೂಲಿನಲ್ಲಿ ಸರಾಸರಿ ೨೫೦೦-೩೦೦೦ ಕಿ. ಗ್ರಾಂ ಹಾಲನ್ನು ಕೊಡುತ್ತವೆ. ಇವುಗಳ ಹಾಲಿನಲ್ಲಿ ಕೊಬ್ಬಿನ ಅಂಶ ಶೇ. ೩.೫-೪.೫ ರಷ್ಟು ಇರುತ್ತದೆ. ಕೊಬ್ಬುರಹಿತ ಘನ ಪದಾರ್ಥ (ಎಸ್.ಎನ್.ಎಫ್.) ಶೇ. ೮.೫-೯.೦ ರಷ್ಟು ಇರುತ್ತದೆ. ಇವು ಪ್ರತಿ ೧೩-೧೪ ತಿಂಗಳಿಗೊಂದು ಕರುವನ್ನು ಹಾಕುತ್ತವೆ. ಈ ಮಿಶ್ರತಳಿಯ ಎತ್ತುಗಳು ಉತ್ತಮ ದೇಹದಾರ್ಡ್ಯ ಹೊಂದಿದ್ದು, ಉಳುಮೆಗೆ ಸೂಕ್ತವಾಗಿರುವುದರಿಂದ ಎಚ್. ಎಫ್. X ದೇವಣಿ ಮಿಶ್ರತಳಿಗಳು ಸಾಕಲು ಯೋಗ್ಯವಾಗಿವೆ.